ಆಡಿದ ರಂಗನಾಡಿದ

ಆಡಿದ ರಂಗನಾಡಿದ 
ರೂಢಿಯೊಳಗೆ ನಮ್ಮ ಮಕ್ಕಳಂತೆ

ಮಣ್ಣಾಟ ಬೇಡವೊ ಬುಕ್ಕಚ್ಚಿ ಮಾಡಬೇಕು
ಅಣ್ಣಯ್ಯ ಬಾರೆಂದು ಎತ್ತಿಕೊಂಡು
ಎಣ್ಣೆ ಒತ್ತಿ ಬೇಗ ಎರೆದಳು ಗೋಪ್ಯಮ್ಮ
ಕಣ್ಣಿಗೆ ಕಾಡಿಗೆ ಇಟ್ಟಳು ಕೇಳಯ್ಯ

ತಿಲಕವು ಫಣೆಯಲಿ ಸರಿಗೆ ಕೊರಳು
ಥಳಥಳಿಸುವ ಕರ್ಣಭೂಷಣ ಉಡಿದಾರ
ಹೊಳೆವ ಪೀತಾಂಬರ ಹೆಗಲಿಂದ ಒಲಿವುದು
ಜಲಜನಾಭನಿಗೆ ಕಡಗ ಕಾಲಸರಗಳು

ಮೂರು ವರುಷಗಳು ಮುದ್ದು ರಂಗಯ್ಯಗೆ
ಮೀರಿದ ಕೆಂದುಟಿ ಜೊಲ್ಲು ಬಾಯಿ
ವಾರಿಗೆಯ ಮಕ್ಕಳ ಕೂಡ ಬೀದಿಯಲಿ
ವಾರಿಜನಾಭನು ನಲಿಯುತಲಿರುತಿರ್ದ

ಚೆಂಡು ಬುಗುರಿ ಮತ್ತು ಕಣ್ಣುಮುಚ್ಚಿ ಕೋಲು
ಗಂಡು ಮಕ್ಕಳ ಸಹ ಗಜುಗದಾಟ
ಕಂಡವರ ಮನವನು ಅಪಹರಿಸುತಲಿ
ದಂಡಪ್ರಣವಗೊಂಬ ವಿರಿಂಚಾದಿಗಳಿಂದ

ಮಣ್ಣನೆತ್ತಿ ತನ್ನ ತಲೆಗೆ ತಿಕ್ಕಿದನು
ಮಣ್ಣಾಯಿತು ಮೈಯು ಪೀತಾಂಬರವು
ಮಣ್ಣ ಗಂಟು ಕಟ್ಟಿ ಉಪ್ಪು ಕೂಗಿದನು
ಮಣ್ಣ ಪಡೆದ ತಂದೆ ಪುರಂದರ ವಿಠಲ

*******************************************************
*