ಸಹಿಸಲಾರೆನೆ ಗೋಪಿ

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ
ವಾಸುದೇವನು ಬಂದು ಮೋಸದಿಂದಲಿ ಎನ್ನ
ವಾಸವ ಸೆಳಕೊಂಡು ಓಡಿ ಪೋದನಮ್ಮ

ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ
ಸಾವಿರ ನುಂಗುವನೆ
ಭಾವಜನಯ್ಯ ಇದೇನೆಂದರೆ ನಿಮ್ಮ
ಕಾವ ದೇವರು ನಾ ಕೇಳಿಕೋ ಎಂಬನೆ

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ


ಅಗ್ರೋದಕ ತಂದು ಜಗಲಿ ಮೇಲಿಟ್ಟರೆ
ವೆಗ್ಗಳದಲಿ ಕುಡಿವ
ಮಂಗಳಮಹಿಮನ ಮೀಸಲೆಂದರೆ ನಿಮ್ಮ
ಮಂಗಳಮಹಿಮನ ಅಪ್ಪ ನಾನೆಂಬನೆ

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ


ಅಟ್ಟಡುಗೆಯನೆಲ್ಲ ಉಚ್ಚಿಷ್ಟ ಮಾಡಿ
ಅಷ್ಟು ತಾ ಬಳಿದುಂಬನೆ
ಕೃಷ್ಣದೇವರ ನೈವೇದ್ಯವೆಂದರೆ ನಿಮ್ಮ
ಇಷ್ಟ ದೇವರು ತೃಪ್ತನಾದನೆಂತೆಂಬನೆ

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ


ಋತುವಾದ ಬಾಲೆಯರು ಪತಿಯೊಡೆಗೆ ಪೋಪಾಗ
ಪಥದೊಳಗಡಗಿರುವ
ಮತಿಗೆಟ್ಟ ಹೆಣ್ಣೆ ಸುಂಕವ ಕೊಡು ಎನುತಲಿ
ರತಿಯಿಂದ ಮಾನವ ಸೂರೆಗೊಂಬುವನೆ

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ


ಅಚ್ಚ ಪಾಲ್ಮೊಸರು ನವನೀತವು ಮಜ್ಜಿಗೆ
ರಚ್ಚೆ ಮಾಡಿ ಕುಡಿವ
ಸ್ವಚ್ಛ ಶ್ರೀಪುರಂದರವಿಟ್ಠಲರಾಯನ
ಇಚ್ಛೆಯಿಂದಲಿ ನಿನ್ನ ಮನೆಗೆ ಕರೆದು ಕೊಳ್ಳೆ


*********************************************************