ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ 
ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ
ಬಾಲಕರನು ಬಡೆವನಮ್ಮ
ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ

ಸಣ್ಣವನಾಗಿ ತೋರುವನಮ್ಮ, ಪಾಲ್-
ಬೆಣ್ಣೆ ಮೊಸರು ಕದಿವನಮ್ಮ
ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು
ಚಿಣ್ಣಗೆ ಬುದ್ಧಿಯ ಪೇಳಮ್ಮ

ಇಟ್ಟ ಕಸ್ತೂರಿ ನಾಮದವನಮ್ಮ, ಅವ
ಹೊಟ್ಟೆಯೊಳಿಡಬಲ್ಲನೀ ಜಗವಮ್ಮ
ದುಷ್ಟ ಹಾವನು ತುಳಿದವನಮ್ಮ, ಗೋಪಿ
ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ

ಅರಳೆಲೆ ಮಾಗಾಯಿಯವನಮ್ಮ, ಹೊನ್ನ
ಬೆರಳ ರನ್ನದ ಮುದ್ರಿಕೆಯವನಮ್ಮ
ಇರುಳುಹಗಲು ನಮ್ಮ ಮರುಳು ಮಾಡಿ ಪೋದ
ತರಳಗೆ ಬುದ್ಧಿಯ ಪೇಳಮ್ಮ

ಮಾಯಾರೂಪಿಲಿ ಬರುವನಮ್ಮ, ಕದ್ದು
ಆವಿನ ಮೊಲೆ ಉಂಬುವನಮ್ಮ
ಮಾವನ ಕೊಂದನಿವನಮ್ಮ, ಚೆಲ್ವ
ದೇವರ ದೇವಗೆ ಬುದ್ಧಿ ಪೇಳಮ್ಮ

ಕಡಹದ ಮರನೇರಿದವನಮ್ಮ, ಬೆಟ್ಟ
ಕೊಡೆ ಮಾಡಿ ಹಿಡಿದು ಕಾಯ್ದವನಮ್ಮ
ಮಡದೇರಂದದಿ ರಮಿಸುವನಮ್ಮ, ಘುಡು
ಘುಡಿಸಿ ಕಂಬದಲೊಡೆವನಮ್ಮ

ಒಮ್ಮೆಗೆ ಈವರಿಗೊಲಿದವನಮ್ಮ, ಚೆಲ್ವ
ಬ್ರಹ್ಮದೇವರ ಪಡೆದವನಮ್ಮ
ನಮ್ಮೆಲ್ಲರ ಪೊರೆವ ಪುರಂದರ-ವಿಠಲಗೆ
ಘಮ್ಮನೆ ಬುದ್ಧಿಯ ಪೇಳಮ್ಮ


********************************************************************