ಎಂಥ ಚೆಲುವೆಗೆ

ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ 

ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ

ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ

ಮನೆಯೆಂಬುದು ಸ್ಮಶಾನವು ನೋಡೇ ಗಜಚರ್ಮಾಂಬರವಮ್ಮಮ್ಮ
ಹಣವೊಂದೆಂಬುದು ಕೈಯೊಳಗಿಲ್ಲವು ಕಪ್ಪರವಿದೆ ನೋಡಮ್ಮಮ್ಮ

ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ

ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆ ಉರಗಭೂಷಣವನು ನೋಡಮ್ಮಮ್ಮ

ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ

ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ
ಈತನ ನಾಮವು ಒಂದೇ ಮಂಗಳ ಕರವುಹರನ ನೋಡಮ್ಮಮ್ಮ

ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ

ತಲೆಯೆಂಬುದು ನೋಡಿದರೆ ಜಡೆಯು ಹೊಳೆಯುತಿದೆ ನೋಡಮ್ಮ
ಮ್ಮಹಲವು ಕಾಲದ ತಪಸಿ ರುದ್ರನ ಮೈಬೂದಿಯು ನೋಡಮ್ಮಮ್ಮ

ಎಂಥ ಚೆಲುವೆಗೆ ಮಗಳನು ಕೊಟ್ಟನು ಗಿರಿರಾಜನು ನೋಡಮ್ಮಮ್ಮ

ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ
ಇಂದಿರೆರಮಣನ ಪುರಂದರವಿಠಲನ ಹೊಂದಿದವನ ನೋಡಮ್ಮಮ್ಮ

*******************************************************************