ಗುಮ್ಮನ ಕರೆಯದಿರೆ

ಗುಮ್ಮನ ಕರೆಯದಿರೆ
ಅಮ್ಮಾ ನೀನು ಗುಮ್ಮನ ಕರೆಯದಿರೆ

ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೇ ಅಮ್ಮ ಅಳುವುದಿಲ್ಲ

ಗುಮ್ಮನ ಕರೆಯದಿರೆ
ಅಮ್ಮಾ ನೀನು ಗುಮ್ಮನ ಕರೆಯದಿರೆ

ಹೆಣ್ಣುಗಳಿರುವಲ್ಲಿಗೆ ಪೋಗಿ ಅವರ ಕಣ್ಣು ಮುಚ್ಚುವದಿಲ್ಲವೇ
ಚಿನ್ನರ ಬಡಿಯೆನು ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ

ಗುಮ್ಮನ ಕರೆಯದಿರೆ
ಅಮ್ಮಾ ನೀನು ಗುಮ್ಮನ ಕರೆಯದಿರೆ

ಬಾವಿಗೆ ಪೋಗೇ ಕಾಣೆ ಅಮ್ಮಾ ನಾನು ಹಾವಿನೋಳಾಡೇ ಕಾಣೆ
ಆವಿನ ಮೊಲೆಯೂಡೇ ಕರುಗಳ ಬಿಡೆ ನೋಡೇ
ದೇವರಂತೇ ಬಂದು ಠಾವಿಲಿ ಕೂಡುವೇ

ಗುಮ್ಮನ ಕರೆಯದಿರೆ
ಅಮ್ಮಾ ನೀನು ಗುಮ್ಮನ ಕರೆಯದಿರೆ

ಮಗನ ಮಾತನು ಕೇಳುತ ಗೋಪೀದೇವಿ ಮುಗುಳುನಗೆಯ ನಗುತಾ
ಜಗದೊಡೆಯ ಶ್ರೀ ಪುರಂದರ ವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

ಗುಮ್ಮನ ಕರೆಯದಿರೆ
ಅಮ್ಮಾ ನೀನು ಗುಮ್ಮನ ಕರೆಯದಿರೆ