ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ

ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ

ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ