ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ
ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ
ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ

ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ

ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು

ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ
ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ

ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ
ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ

ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗನೆ

ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ

ಮತ್ತು ಕಂಡಳು ಅವಳು ಗೋಕುಲವೆಲ್ಲವ
ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ

ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು
ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ

ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ
ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು

ಕಂದನು ನೀನಲ್ಲ ಕಂದರ್ಪ ಜನಕನೆ
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ

ದೇವದಿದೇವನೆ ದೇವಕಿತನಯನೆ
ಭಾವಜನಯ್ಯನೆ ಬಾರಯ್ಯ ದೊರೆಯೆ

ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ
ಜಯಗಳಾಗಲಿ ಅವನ ಭಕ್ತರ ವೃಂದಕೆ

********************************************************************************