ಕೊಳಲನೂದುತ್ತಾ ಬಂದ
ಕೊಳಲನೂದುತ್ತಾ ಬಂದ
ನಮ್ಮ ಗೋಪಿಯ ಕಂದ
ಕೊಳಲನೂದುವುದು ಬಲು ಚಂದ
ಆ ವಸುದೇವನ ಕಂದ , ಇವ ನೋಡೆ
ದೇವಕಿ ಬಸಿರೊಳು ಬಂದ
ಮಾವ ಕಂಸನ ಕೊಂದ
ಭಾವಜನಯ್ಯ ಮುಕುಂದ
ಮುತ್ತಿನಾಭರಣವ ತೊಟ್ಟು
ಹಸ್ತದಿ ಕೊಳಲ ಕೊಟ್ಟು
ಕಸ್ತೂರಿ ತಿಲಕನಿಟ್ಟಾ
ತುತ್ತುರುತುರುರೆಂಬ ನಾದವ ಪಿಡಿಯೆ
ಹಿಂದೆ ಗೋವುಗಳ ಹಿಂಡು
ಮುಂದೆ ಗೋಪಾಲ ದಂಡು
ಹಿಂದಕ್ಕೆ ದೈತ್ಯರ ಕೊಂದ
ಪುರಂದರವಿಠಲ ಚೆಂದ
**********************************************************************