ಕೊಳಲನೂದುವ ಚದುರನ್ಯಾರೆ
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು
ನಾದದಿ ತುಂಬಿತು ಗೋವರ್ಧನಗಿರಿ
ಯಾದವಕುಲ ನಭ ನೆರೆದಿತು ಖಗಕುಲ
ಸಾಧಿಸಿ ನೋಡಲು ಕೃಷ್ಣನ ಈಗಲೆ
ಸಾಧ್ಯವೇನೆ ಬೃಂದಾವನದೊಳು
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು
ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಜಮುನಾ
ಆವು ಕಾವುತಲಿ ಗೋವಳರೆಲ್ಲರ
ಹಾವ ಭಾವದಲಿ ಬೃಂದಾವನದೊಳು
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು
ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃಂದಾವನದೊಳು
ಸರಿ ಸರಿ ಈ ಶ್ರೀಕೃಷ್ಣನು ಈಗಲೆ
ತುರಗಳ ಕಾಯ್ವ ಕದಂಬ ವನದೊಳು
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ತಾ ಪೊಳೆವ ಕರದಿ ಪಿಡಿದು
****************************************************************