ಕೃಷ್ಣಮೂರ್ತಿ ಕಣ್ಣ ಮುಂದೆ
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಕಷ್ಟಗಳೆಲ್ಲಾ ಪರಿಹರಿಸಿ ಮನ-
ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಮಸ್ತಕದಲಿ ಮಾಣಿಕ್ಯದ ಕಿರೀಟ
ಕಸ್ತೂರಿ ತಿಲಕದಿಂದೆಸೆವ ಲಲಾಟ
ಶಿಸ್ತಿಲಿ ಕೊಳಲನೂದುವ ಓರೆ ನೋಟ
ಕೌಸ್ತುಭ ಎಡಬಲದಲಿ ಓಲಾಟ
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯ ಕೊರಳು
ಬಗೆ ಬಗೆ ಹೊನ್ನುಂಗುರವಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆ ಯರಳು
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಉಡುದಾರ ವಡ್ಡ್ಯಾಣ ನಿಖಿಲಾಭರಣ
ಉಡುಗೆ ಪೀತಾಂಬರ ರವಿಶತ ಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ
ಒಡೆಯ ಶ್ರೀಪುರಂದರ ವಿಠಲನ ಕರುಣ
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಕಷ್ಟಗಳೆಲ್ಲಾ ಪರಿಹರಿಸಿ ಮನ-
ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
************************************************************