ಮಕ್ಕಳ ಮಾಣಿಕವೆ

ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ-
ರಕ್ಕಸ ಶಕಟನ ತುಳಿದುದೀ ಪಾದವೆ

ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ
ಜಲಧಿಯ ಪಡೇದದ್ದೀ ಪಾದವೆ ಕೃಷ್ಣ
ಹಲವು ಕಾಲಗಳಿಂದ ಶಿಲೆ ಶಾಪ ಪಡೆದಿರಲು
ಫಲಕಾಲಕ್ಕೊದಗಿದ್ದುದೀ ಪಾದವೆ ಕೃಷ್ಣ

ಮಕ್ಕಳ ಮಾಣಿಕವೆ ಮನೋಹರ ನಿಧಿಯೆ

ಕಡು ಕೋಪದಿಂದ ಕಾಳಿಂಗನ ಮಡುವ ಕಲಕಿ
ಹೆಡೆಯನ್ನು ತುಳಿದದ್ದೀ ಪಾದವೆ ಕೃಷ್ಣ
ಸಡಗರದಿ ಕೌರವನ ಸಿಂಹಾಸನವನು
ಹೊಡೆಮಗುಚಿ ಕೆಡಹಿದ್ದೀ ಪಾದವೆ ಕೃಷ್ಣ

ಮಕ್ಕಳ ಮಾಣಿಕವೆ ಮನೋಹರ ನಿಧಿಯೆ

ಶೃಂಗಾರದಿಂದಾರು ಹೆಂಗಳ ಸಹಿತ ಶ್ರೀ-
ಅಂಗನೆಯೊತ್ತುವದೀ ಪಾದವೆ ಕೃಷ್ಣ
ಸಂಗ ಸುಖದಿ ಶ್ರೀ ಪುರಂದರವಿಠಲನೆ
ಅಂಗದೊಳಗಡಗಿದ್ದುದೀ ಪಾದವೆ ಕೃಷ್ಣ

ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ-
ರಕ್ಕಸ ಶಕಟನ ತುಳಿದುದೀ ಪಾದವೆ

**************************************************************************