ನಾರಾಯಣ ಎನ್ನಿರೋ
ನಾರಾಯಣ ಎನ್ನಿರೋ,
ಶ್ರೀ ನರಹರಿ ಪಾರಾಯಣ ಮಾಡಿರೋ
ನಾರಾಯಣನೆಂದು ಅಜಮಿಳನು ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ
ನಾರಾಯಣ ಎನ್ನಿರೋ,
ಶ್ರೀ ನರಹರಿ ಪಾರಾಯಣ ಮಾಡಿರೋ
ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು
ಬೇಸತ್ತು ತಿರುಗಲೇಕೆ
ವಾಸುದೇವನ ನಾಮ ಬಾಯ್ತುಂಬ ನೆನೆದರೆ
ಕ್ಲೇಶಗಳೆಂಬುದನು ಲೇಶ ಮಾತ್ರವಿಲ್ಲದೆ
ನಾರಾಯಣ ಎನ್ನಿರೋ,
ಶ್ರೀ ನರಹರಿ ಪಾರಾಯಣ ಮಾಡಿರೋ
ಚೋರರ ಭಯವಿಲ್ಲವೊ, ಹರಿನಾಮಕ್ಕೆ
ಯಾರ ಅಂಕೆಯಿಲ್ಲವೊ
ಊರನಾಳುವ ದೊರೆ ನೀತಿ ಭೀತಿಗಳಿಲ್ಲ
ಘೊರಪಾತಕವೆಲ್ಲ ದೂರ ಮಾಡುವುದಿಕ್ಕೆ
ನಾರಾಯಣ ಎನ್ನಿರೋ,
ಶ್ರೀ ನರಹರಿ ಪಾರಾಯಣ ಮಾಡಿರೋ
ಸ್ನಾನವ ಮಾಡಲೇಕೆ, ಮಾನವರಿಗೆ
ಮೌನ ಮಂತ್ರಗಳೇಕೆ
ದೀನಪಾಲಕ ನಮ್ಮ ಬೆಟ್ಟದೊಡೆಯನ
ಧ್ಯಾನಕೆ ಸರಿಯುಂಟೆ ಪುರಂದರವಿಠಲನ
ನಾರಾಯಣ ಎನ್ನಿರೋ,
ಶ್ರೀ ನರಹರಿ ಪಾರಾಯಣ ಮಾಡಿರೋ
*****************************************************