ನೀನೇ ದಯಾಳೋ
ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ದೊರೆಗಳ ನಾ ಕಾಣೆ
ದಾನವಾಂತಕ ದೀನಜನ ಮಂದಾರನೆ
ಧ್ಯಾನಿಪರ ಮನ ಸಂಚಾರನೆ
ಮೌನನಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೋ ಸನಕಾದಿ ವಂದ್ಯನೆ
ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ
ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ
ಖಗಪತಿ ವಾಹನನೆ
ಮಗುವಿನ ಮಾತೆಂದು ನಗುತ ಕೇಳಿ ನೀನು
ಬೇಗದಿಂದಲಿ ಕಾಯೋ ಸಾಗರಶಯನನೆ
ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ
ಮಂದರಧರ ಅರವಿಂದ ಲೋಚನ ನಿನ್ನ
ಕಂದನೆಂದೆಣಿಸೊ ಎನ್ನ
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ
ಬಂದೆನ್ನ ಕಾಯೋ ಶ್ರೀ ಪುರಂದರವಿಠಲನೆ
ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ
ನಿಗಮ ಗೋಚರ ಮುಕುಂದ
***************************************************************