ನಿನ್ನಂತೆ ನಾನಾಗಲಾರೆ

ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ 
ನಿನ್ನಂತಾಗದೆ ನನ್ನವನಾಗನೆ ನಿನ್ನ ಪ್ರಭು ಶ್ರೀರಾಮ
ನಿನ್ನ ಪ್ರಭು ಶ್ರೀರಾಮ

ಎಟುಕದ ಹಣ್ಣನೆ ನಾ ತರಲಾರೆ ಮೇಲಕ್ಕೆ ಎಗರಿ ಹನುಮ
ಸೂರ್ಯನ ಹಿಡಿವ ಸಾಹಸಕ್ಕಿಳಿದರೆ ಆಕ್ಷಣ ನಾ ನಿರ್ನಾಮ

ಹಾದಿಯ ಹಳ್ಳವೆ ದಾಟಲಸಾಧ್ಯ ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ ಅಯ್ಯೋ ರಾಮ ರಾಮ

ಜಗಳವ ಕಂಡರೆ ಓಡುವೆ ದೂರ ಎದೆಯಲಿ ಡವ ಡವ ಹನುಮ
ರಕ್ಕಸರ ನಾ ಕನಸಲಿಕಂಡರೂ ಬದುಕಿಗೆ ಪೂರ್ಣ ವಿರಾಮ

ಅಟ್ಟವ ಹತ್ತಲು ಶಕ್ತಿಯು ಇಲ್ಲ ಇಂಥ ದೇಹವು ಹನುಮ
ಬೆಟ್ಟವನೆತ್ತುವೆನೆಂದರೆ ಎನ್ನನು ನಂಬುವನೇ ಶ್ರೀರಾಮ

ಕನಸಲು ಮನಸಲು ನಿನ್ನ ಉಸಿರಲು ತುಂಬಿದೆ ರಾಮನ ನಾಮ
ಚಂಚಲವಾದ ನನ್ನೀಮನದಲಿ ನಿಲ್ಲುವರಾರೋ ಹನುಮ

ಭಕ್ತಿಯು ಇಲ್ಲ ಶಕ್ತಿಯು ಇಲ್ಲ ಹುಟ್ಟಿದೆ ಏತಕೋ ಕಾಣೆ
ನೀ ಕೃಪೆಮಾಡದೆ ಹೋದರೆ ಹನುಮ ನಿನ್ನ ರಾಮನ ಆಣೆ