ರಾಮನಾಮವೆಂಬೋ ನಾಮವ ನೆನೆದರೆ

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ 
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ
ಶ್ರೀಮನ್ ನಾರಾಯಣ ಜಗಕೆ

ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ
ಬೆಟ್ಟವ ಬೆನ್ನೊಳು ಪೊತ್ತನು ರಾಮ ಕೂರ್ಮಾವತಾರಕ್ಕೆ

ಭೂಮಿಯ ಪೊತ್ತು ನೀರೊಳು ಮುಳುಗಿದ ವರಾಹವತಾರಕ್ಕೆ
ಕರುಳನು ಬಗೆದು ಮಾಲೆಯ ಧರಿಸಿದ ಪ್ರಹ್ಲಾದ ಸಲಹುದಕೆ

ಭೂಮಿಯದಾನವ ಬೇಡಿದ ರಾಮ ವಾಮನವತಾರಕ್ಕೆ
ತಾಯಿಯ ಶಿರವನು ಕಡಿದನು ರಾಮ ಭಾರ್ಗವತಾರಕ್ಕೆ

ವನವಾಸವ ತಾ ಮಾಡಿದ ರಾಮ ಜನಕನ ವಾಕ್ಯಕ್ಕೆ
ಮಾವ ಕಂಸನ ಕೊಂದನು ಕೃಷ್ಣ ತಾಯಿಯ ಬಿಡಿಸಲಿಕೆ

ಸತಿಯರ ವ್ರತಗಳ ಕೆಡಿಸಿದ ರಾಮ ತ್ರಿಪುರ ಗೆಲುವುದಕೆ
ವಾಹನ ಬಿಟ್ಟು ತುರಗವನೇರಿದ ಕಲ್ಕ್ಯವತಾರಕ್ಕೆ

ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ
ಮೂರು ಲೋಕಕೆ ಕಾರಣ ಕರ್ತಾ ನಾರಾಯಣ ಜಗಕೆ
ಶ್ರೀಮನ್ ನಾರಾಯಣ ಜಗಕೆ