ಸಿಕ್ಕಿದನೆಲೆ ಜಾಣೆ
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ
ಭಕ್ತವತ್ಸಲ ದೇವನು
ಮಕ್ಕಳ ಚಂಡಿಕೆ ಮರದ ಕೊನೆಗೆ ಕಟ್ಟಿ
ಘಕ್ಕನ ಚಪ್ಪಾಳೆಯಿಕ್ಕಿ ನಲಿವ ನಮ್ಮ
ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಹಚ್ಚಿಕೊಂಡು
ಬಣ್ಣ ವಸ್ತ್ರವ ಬಿಚ್ಚಿ ಬತ್ತಲಿರೆ
ಕಣ್ಣಿಗೆ ಬಿಸಿನೀರು ಚೆಲ್ಲಿ ಸೀರೆಯನೊಯ್ದು
ಉನ್ನತವಾದ ವೃಕ್ಷವನೇರಿ ಇಹನಮ್ಮ
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ
ಭಕ್ತವತ್ಸಲ ದೇವನು
ಪಟ್ಟೆ ಮಂಚದ ಮೇಲೆ ಪತಿಯಂತೆ ಕುಳ್ಳಿರೆ
ಎಷ್ಟು ಸ್ವತಂತ್ರ ಇವಗೆ ಗೋಪಿ
ಉಟ್ಟ ಸೀರೆಯನೊಯ್ದು ಬಟ್ಟಕುಚವ ಪಿಡಿವ-
ನೆಷ್ಟೆಂದ ಹೇಳೆ ಭ್ರಷ್ಟ ಮಾಡಿದನಮ್ಮ
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ
ಭಕ್ತವತ್ಸಲ ದೇವನು
ಸಡಗರದಿ ಷೋಡಶ ಸಹಸ್ರ ಸ್ತ್ರೀಯರ
ಒಡಗೂಡಿ ಕೊಳಲನೂದುತ ಬಂದು
ಕಡೆವ ಗೋಪಿಯ ಜಡೆ ಪಿಡಿದೆಳೆವ ಎ-
ನ್ನೊಡೆಯ ಪುರಂದರವಿಠಲರಾಯನೆ
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ
ಭಕ್ತವತ್ಸಲ ದೇವನು
************************************************************